ಎಂಪೆಡೋಕ್ಲೀಸ್

	?-ಮರಣ-ಸು. ಕ್ರಿ.ಪೂ. 430. ಪ್ರಾಚೀನ ಗ್ರೀಸಿನ ತತ್ತ್ವe್ಞÁನಿ. ಕಾರ್ಯಕುಶಲನಾದ ವೈದ್ಯ, ಭವಿಷ್ಯವಾದಿ. ಧರ್ಮೋಪದೇಶಕ. ಸಂಸಾರಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ; ಜಗತ್ತೆಲ್ಲವೂ ಪೃಥ್ವಿ, ಜಲ, ತೇಜಸ್ ಮತ್ತು ವಾಯು ಎಂಬ ನಾಲ್ಕು ತತ್ತ್ವಗಳಿಂದ ಉಂಟಾಯಿತು ಎಂದು ಈತನ ಮತ. ಈ ತತ್ತ್ವಗಳು ಒಂದಕ್ಕೊಂದು ವಿಭಿನ್ನವಾದವು. ಈ ತತ್ತ್ವಗಳ ಸೂಕ್ಷ್ಮ ಅಂಶಗಳು ಒಂದರೊಡನೆ ಒಂದು ಮಿಲನವಾಗಿರುವುದರಿಂದ ಅನೇಕ ವಿಲಕ್ಷಣವಾದ ದ್ರವ್ಯಗಳು ಉತ್ಪನ್ನವಾಗುತ್ತವೆ. ತತ್ತ್ವಗಳ ಸಂಯೋಗ ಮತ್ತು ವಿಯೋಗಗಳಿಗೆ ಕಾರಣವಾದ ಎರಡು ಶಕ್ತಿಗಳಿವೆ. ಒಂದರ ಹೆಸರು ಪ್ರೇಮ ಮತ್ತೊಂದರ ಹೆಸರು ದ್ವೇಷ. ಪ್ರೇಮದ ಶಕ್ತಿಯಿಂದ ಪದಾರ್ಥಗಳಲ್ಲಿ ಆಕರ್ಷಣೆ ಹುಟ್ಟುತ್ತದೆ. ದ್ವೇಷದಿಂದ ವೈಷಮ್ಯ ಹುಟ್ಟುತ್ತದೆ. ಪೃಥ್ವಿಯ ಮೇಲೆ ಮೊದ ಮೊದಲು ಹುಟ್ಟಿದ ಜಂತುಗಳು ಕುರೂಪವಾಗಿದ್ದವು. ಕ್ರಮ ಕ್ರಮವಾಗಿ ಅವು ಒಳ್ಳೆಯ ರೂಪವನ್ನು ತಾಳಿದವು- ಎಂಬ ವಿಕಾಸವಾದವನ್ನು ಈತ ಪ್ರತಿಪಾದಿಸುತ್ತಾನಲ್ಲದೆ ಆಗಾಗ ಎಲ್ಲವೂ ಮತ್ತೆ ತಮ್ಮ ಮೊದಲ ಸ್ಥಿತಿಗೇ ಮರಳುತ್ತವೆ ಎಂದೂ ಹೇಳುತ್ತಾನೆ.

	ಎಂಪೆಡೋಕ್ಲೀಸ್‍ನ ದರ್ಶನದ ಪ್ರಕಾರ ಒಂದೊಂದು ಇಂದ್ರಿಯವೂ ಅದಕ್ಕೆ ಸಮಾನವಾದ ಒಂದೊಂದು ತತ್ತ್ವವನ್ನು ಗ್ರಹಿಸಬಲ್ಲದು. ಉದಾಹರಣೆಗೆ, ಕಣ್ಣಿನಲ್ಲಿ ಆಗ್ನೇಯ ತತ್ತ್ವ ಹೆಚ್ಚಾಗಿದೆ. ಅದರ ಸಲುವಾಗಿ ಕಣ್ಣಿನ ಮೂಲಕ ಪ್ರಭೆಯನ್ನು ಗ್ರಹಣ ಮಾಡುವುದು ಸಾಧ್ಯ. ಈ ತತ್ತ್ವಗಳಿಗೂ ಇಂದ್ರಿಯಗಳಿಗೂ ಇರುವ ಸಂಬಂಧವನ್ನು ವೈಶೇಷಿಕ ಸೂತ್ರಕಾರ ಕಣಾದ ಎತ್ತಿಹಿಡಿದಿದ್ದಾನೆ. 
						 				
 (ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ